ಇಡೀ ವಿಶ್ವದ ಜನರು ಒಂದೇ ಸಮಯದಲ್ಲಿ ಒಂದೇ ವಿಷಯದ ಬಗ್ಗೆ ಇಷ್ಟು ತಲ್ಲಣಗೊಂಡಿರುವುದು ಬಹುಶಃ ಇದೇ ಮೊದಲು ಅನಿಸುತ್ತದೆ. ವೈದ್ಯ ತಂತ್ರಜ್ಞಾನದ ಆಧುನಿಕ ಆವಿಷ್ಕಾರಗಳಿಗಿಂತ ಮೊದಲು ಇಂತಹ ಆರೋಗ್ಯ ತುರ್ತು ಸನ್ನಿವೇಶಗಳು ನಡೆದಿರಬಹುದು. ಆದರೆ ಪ್ರಪಂಚದ ಮೂಲೆ ಮೂಲೆಗಳಲ್ಲಿ ಏನಾಗುತ್ತಿದೆ ಎಂಬ ಸಂಪರ್ಕ, ಮಾಹಿತಿ ಗೊತ್ತಾಗುತ್ತಿರುವುದು ಇದೆ ಮೊದಲು ಅನಿಸುತ್ತದೆ. ನಮ್ಮನ್ನು ಏಕಕಾಲದಲ್ಲಿ ಒಂದೇ ವಿಷಯದ ಬಗ್ಗೆ ಎಚ್ಚರಿಕೆ, ಆತಂಕ, ಭಯ, ಮುಂಜಾಗರೂಕತೆ, ಚರ್ಚೆ, ಏಕರೂಪತೆಗೆ ತರಲು ತಂತ್ರಜ್ಞಾನ ಮತ್ತು ಸಂಪರ್ಕ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಸಹಾಯವಾದರೆ ಮತ್ತೊಂದು ರೀತಿಯಲ್ಲಿ ಏಕರೂಪಿ ಅಗಾಧ ಮಾನಸಿಕ ಒತ್ತಡಗಳಿಗೂ ಕಾರಣವಾಗುವ ಅಪಾಯವಿದೆ. ಒಮ್ಮೆಲೆ ನಿತ್ಯದ ಚಟುವಟಿಕೆಗಳಿಂದ ದೂರವಿದ್ದು ಗೃಹಬಂಧನದಲ್ಲಿ ಇರಬೇಕಾಗಿರುವುದರಿಂದ ಮನಸಿನ ಮೇಲಿನ ಪರಿಣಾಮಗಳು ಹೆಚ್ಚಿರುತ್ತವೆ. ಕೆಲಸ ಇಲ್ಲದಿರುವುದು, ಹೊರಗೆ ಹೋಗದಿರುವುದು, ಹೊರಗಿನವರೊಂದಿಗೆ ಮಾತುಕತೆ ಇಲ್ಲದಿರುವುದು ಸಂಘಜೀವಿಯಾದ ಮನುಷ್ಯನಿಗೆ ತುಸು ಕಷ್ಟ ಆಗಬಹುದು. ಆದರೆ ಮನೆಯಲ್ಲಿ ಇದ್ದು ಒಂಟಿತನ(Loneliness)ವನ್ನು ಏಕಾಂತ(Solitude)ವಾಗಿ ಮಾರ್ಪಾಡು ಮಾಡಿಕೊಳ್ಳಲು ಅವಕಾಶವಿದೆ. ಕೆಲಸ,ಗಳಿಕೆ,ಸಂಘದ ವಾತಾವರಣದಿಂದ ಹೊರಬಂದು ಮನೆಯಲ್ಲೆ , ಕುಟಂಬದ ಸದಸ್ಯರ ಜೊತೆ ಸಂತೋಷ ಹೊಂದಲು ಅವಕಾಶವಿದೆ.
ಕೆಲವರು ಮನೆಯಲ್ಲಿ ಇದ್ದರೂ ಮನೆ ಸದಸ್ಯರೊಂದಿಗೆ ಅಷ್ಟಕಷ್ಟೆ. ಹೊರಗಿನ ಸ್ನೇಹಿತರ ಜೊತೆಗೆ ಹೆಚ್ಚು ಸಂತೋಷ, ಮುಕ್ತವಾಗಿ ಇರುತ್ತಾರೆ. ಯುವಕರು, ವಯಸ್ಕ ಪುರುಷರು ಅವರದೇ ಆದ ಸ್ನೇಹ ವಲಯವನ್ನು ಹೊಂದಿರುತ್ತಾರೆ ಆಟ, ಕೂಟ, ಅಭ್ಯಾಸ ಗಳಲ್ಲಿ ಭೇಟಿಯಾಗುವ ಮೂಲಕ ಮುಕ್ತತೆ, ಸ್ವತಂತ್ರ ಪಡೆಯುತ್ತಾರೆ. ಉದಾಹರಣೆಗೆ ವಯಸ್ಕ ಪುರುಷರು ಸ್ನೇಹಿತರ ಜೊತೆ ಸೇರಿ ವಾಕಿಂಗ್ ಮಾಡುವುದು, ಮದ್ಯಪಾನ ಮಾಡುವುದು, ಚರ್ಚೆ ಮಾತುಕತೆ ನಡೆಸುವುದು ಈಗ ಸಾಧ್ಯವಿಲ್ಲದೆ ಮನೆಯಲ್ಲಿದ್ದು ಒತ್ತಡವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಕೋಪ, ಉದ್ರೇಕ, ಗಲಾಟೆ,ಕೂಗಾಟ ಆಗುವ ಸಾಧ್ಯತೆ ಸಹ ಬರಬಹುದು. ಪ್ರತಿದಿನ ಹಣ ಗಳಿಸುವವರಿಗೆ , ಪ್ರತಿದಿನ ಕುಡಿಯುವವರಿಗೆ ,ವೃದ್ಧರಿಗೆ ವಿವಿಧ ಚಟ, ಅಭ್ಯಾಸ ಇರುವವರಿಗೆ, ಬಹಿರ್ಮುಖಿ (Extrovert)ಗಳಿಗೆ ಮನೆಯಲ್ಲಿ ಇರುವಿಕೆ ಹೆಚ್ಚು ಮಾನಸಿಕ ತೊಂದರೆಗಳನ್ನು ಉಂಟುಮಾಡಬಹುದು.
ಕೋವಿಡ್ ವೈರಸ್ ಹೊಂದಿರುವವರಂತೆಯೇ ಇವರೂ ಮತ್ತೊಂದು ರೂಪದ ಮಾನಸಿಕ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿರುತ್ತಾರೆ. ಟಿ ವಿ ಯಲ್ಲಿ ಸದಾ ತಾಜಾ ಸುದ್ಧಿಗಳೆಂದು ಪುಂಖಾನುಪುಂಖವಾಗಿ ಕೋವಿಡ್ ವೈರಸ್ ಸಂಬಂಧಿತ ನ್ಯೂಸ್ ಹಲವು ಚಾನೆಲ್ ನಲ್ಲಿ ನಿರಂತರ ಬರುತ್ತಿರುತ್ತದೆ. ದಿನಪೂರ್ತಿ ನೋಡುವುದರಿಂದ ಮಾನಸಿಕ ದುಗುಡ , ಭಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚು. ವ್ಯಕ್ತಿಗಳು ದೂರವಿದ್ದರೂ ಸಂಪರ್ಕಕ್ಕೆ ಮೊಬೈಲ್ ಇರುವುದರಿಂದ ಮಾತುಗಳು, ವಿಚಾರಗಳು, ಭಯ ಅವಶ್ಯಕತೆಗಿಂತ ಹೆಚ್ಚು ಹಂಚಲ್ಪಟ್ಟು ಒತ್ತಡಗಳಿಗೆ ಕಾರಣವಾಗುತ್ತದೆ.
ಕಛೇರಿ, ಹೋಟೆಲ್, ಶಾಲೆ, ದೇವಾಲಯ, ಸಿನಿಮಾ ಹಾಲ್, ಆಟದ ಮೈದಾನ ಎಲ್ಲವೂ ಮನೆಯೇ ಆಗಿದೆ.
ಒಟ್ಟಾರೆ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಮನೆ ಮಾರ್ಪಾಡಾಗಿದೆ. ಕೋವಿಡ್ ವೈರಸ್ ತಡೆಯಲು ಇನ್ನೂ ಕನಿಷ್ಠ ಒಂದು ತಿಂಗಳಾದರೂ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಇರುವುದರಿಂದ ಮನೆಯಲ್ಲಿ ಎಲ್ಲರಿಗೂ, ಎಲ್ಲ ಸ್ವರೂಪದ ವಾತಾವರಣದಲ್ಲಿ ಸಿಗುವ ಆನಂದ ಸಿಗುವಂತೆ ಮಾಡಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಆನಂದಭರಿತ ಕುಟುಂಬ ವಾತಾವರಣಕ್ಕಾಗಿ ನಾವು ಹೀಗೆ ಮಾಡಬಹುದೇ ? ಕೆಲವು ಸಲಹೆಗಳು ಇಲ್ಲಿವೆ..
@ ಕುಟುಂಬದಲ್ಲಿ ಮಕ್ಕಳು, ವಯಸ್ಕರು, ವೃದ್ಧರು ಇರುವುದರಿಂದ ಪರಸ್ಪರ ಪ್ರೀತಿಯಿಂದ ಮಾತನಾಡಿಕೊಳ್ಳುವುದು.
@ಬೆಳಿಗ್ಗೆ ಯೋಗ, ಪ್ರಾಣಾಯಾಮ, ಧ್ಯಾನ , ವಾಕಿಂಗ್ ಆದರೆ ದೈಹಿಕ,ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಅವರವರ ನಂಬಿಕೆಗಳಿಗೆ ಅನುಗುಣವಾಗಿ ಮನೆಯಲ್ಲಿ ಪೂಜೆ, ಶ್ಲೋಕ, ಪಾರಾಯಣ ಮಾಡಬಹುದು.
@ಮನೆಯ ಅಡುಗೆ, ಸ್ವಚ್ಛತಾ ಕೆಲಸಗಳಲ್ಲಿ ಎಲ್ಲರೂ ಸಹಭಾಗಿಗಳಾಗುವುದು. ಮಕ್ಕಳನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ತೊಡಗಿಸುವುದು.
@ ಒಟ್ಟಿಗೆ ಕುಳಿತು ಊಟ ಮಾಡುವುದು, ಊಟ ಮಾಡುವಾಗ ಟಿ ವಿ ಆಫ್ ಮಾಡುವುದು ಹಾಗೂ ಮೊಬೈಲ್ ಬಳಸದಿರುವುದು.
@ಟಿ ವಿ ಯಲ್ಲಿನ ನ್ಯೂಸ್ ಚಾನಲ್ ನ್ನು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ನೋಡಿ ಉಳಿದ ಅವಧಿಯಲ್ಲಿ ಎಲ್ಲರೂ ನೋಡಬಹುದಾದ ಸದಭಿರುಚಿಯ ಸಿನಿಮಾ, ಸಾಕ್ಷ್ಯಚಿತ್ರ, ಕಿರುಚಿತ್ರ ನೋಡಲು ಬಳಸಬಹುದು. ಮದುವೆ, ನಾಮಕರಣ, ಗೃಹಪ್ರವೇಶದಂತಹ ಕೌಟುಂಬಿಕ ಸಿ ಡಿ ಗಳನ್ನು ನೋಡಬಹುದು.
@ಆಕಾಶವಾಣಿ, FM, ವಿವಿಧಭಾರತಿ ರೇಡಿಯೋ ಮನೆಯಲ್ಲಿ ಹಾಕಿ ಕೇಳಿದರೆ ಮನರಂಜನೆ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.
@ಪುಸ್ತಕಗಳನ್ನು ಓದಬಹುದು, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು. ಕ್ರಾಫ್ಟ್ ಮಾಡುವುದು, ಹೇಳಿಕೊಡುವುದು ಸಹ ಆಗಬಹುದು.
@ಮನೆಯಲ್ಲಿರುವ ಪುಸ್ತಕ, ವಸ್ತುಗಳನ್ನು, ಕಪಾಟುಗಳನ್ನು ಸ್ವಚ್ಛ ಮಾಡಿಕೊಂಡು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳುವ ಕೆಲಸ ಮಾಡಬಹುದು. ಮನೆಯನ್ನು ಅಲಂಕಾರಿಕವಾಗಿ ಮಾಡಿಕೊಳ್ಳಬಹುದು.
@ಕೈತೋಟದಲ್ಲಿ ತೊಡಗಿಸಿಕೊಂಡು ತರಕಾರಿ, ಹೂಗಿಡ, ಕುಂಡಗಳನ್ನು ಸ್ವಚ್ಛ ಮಾಡಿ, ಕಳೆ ತೆಗೆದು, ನೀರು ,ಗೊಬ್ಬರ ಹಾಕುವ ಕೆಲಸ ಮಾಡಬಹುದು.
@ಮನೆಯ ಸದಸ್ಯರಿಗೆ ಇರುವ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಲು ಕೋರಿಕೊಂಡು, ಆಸ್ವಾದಿಸಿ, ಅಭಿನಂದಿಸಬಹುದು.
@ಪ್ರಕೃತಿಯ ಹೊರತಾದ ಜೀವನವುಂಟೇ ? ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ವಿಶಾಲ ಆಕಾಶ, ನಕ್ಷತ್ರಗಳು, ಮರಗಿಡಬಳ್ಳಿಗಳೂ, ಎಲೆ ಹೂ ದುಂಬಿಗಳು, ಪಕ್ಷಗಳ ಸಂಗೀತವನ್ನು ನಾವಿರುವ ಕಡೆಯಿಂದಲೇ ಆಸ್ವಾದಿಸಬಹುದು. ವೀಕ್ಷಿಸಿ ಆನಂದಿಸಬಹುದು.
@ಹಿರಿಯರು ಮಕ್ಕಳಿಗೆ ಕಥೆಗಳನ್ನು ಹೇಳಬಹುದು. ಮನೆಯವರೆಲ್ಲರಿಗೂ ತಮ್ಮ ಜೀವನದ ನೆನಪುಗಳನ್ನು ಹೇಳಿಕೊಳ್ಳಲು, ಕೇಳಲು ಅವಕಾಶವಾದರೆ ತುಂಬಾ ಹಿತಕರ.
@ಚೌಕಾಬಾರಾ, ಮಳೆಗುಣಿಮಣಿ, ಚೆಸ್, ಕೇರಮ್, ಹಾವು-ಏಣಿಯಾಟ, ಮುಂತಾದ ಮನೆಯೊಳಗೆ ಆಡಬಹುದಾದ ಆಟಗಳನ್ನು ಆಡಬಹುದು. ಹಾಡುವುದು, ನೃತ್ಯ, ಸಂಗೀತ ಉಪಕರಣಗಳ ನುಡಿಸುವಿಕೆ ಪ್ರತಿಭೆ ಇರುವವರು ಪ್ರತಿದಿನ ಪ್ರದರ್ಶನ ನೀಡಿ ರಂಜಿಸಬಹುದು. ಅವರಿಗೆ ಪ್ರೀತಿಯಿಂದ ಅಭಿನಂದನೆ ಸಲ್ಲಿಸಬಹುದು.
@ಮದ್ಯಪಾನ, ಧೂಮಪಾನ, ಇಸ್ಪೀಟ್ ನಂತಹ ಚಟಗಳಿರುವವರನ್ನು ಮನೆಯಲ್ಲಿ ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಅವರಿಗೆ ಒಂಟಿತನ, ಒತ್ತಡ ಉಂಟಾಗದಂತೆ ಪ್ರೀತಿಯಿಂದ ನೋಡಿಕೊಳ್ಳುವುದು ತುಂಬಾ ಸವಾಲಿನ ಕೆಲಸವಾದ್ದರಿಂದ ಮನೆಯಲ್ಲಿ ಅವರಿಗೆ ಹೆಚ್ಚು ಗಮನ ನೀಡಿ ಪ್ರೀತಿಯ ವಾತಾವರಣ ಉಂಟುಮಾಡಿ, ಅಂತಹವರನ್ನು ಒಂಟಿಯಾಗಿ ಬಿಡದೆ ಎಲ್ಲ ಚಟುವಟಿಕೆಗಳಲ್ಲಿ ಒಳಗೊಳ್ಳುವಂತೆ, ತೂಡಗಿಸಿಕೊಳ್ಳುವಂತೆ ಮಾಡುವುದು, ಸಣ್ಣ ಪುಟ್ಟ ಟಾಸ್ಕ್ ಗಳನ್ನು ನೀಡಿ ಅವರನ್ನು ಪಾಸಿಟಿವ್ ಕಡೆಗೆ ಹುರಿದುಂಬಿಸುವುದು ತುಂಬಾ ಅತ್ಯಗತ್ಯ.
@ಯಾವುದಾದರೂ ಆರೋಗ್ಯಕರ, ಹಿತಕರ ವಿಷಯದ ಮೇಲೆ ಚರ್ಚೆ, ಮಂಥನ ನಡೆಸಬಹುದು. ಮನೆಗೆ ಸಂಬಂಧಿಸಿದ ಯಾವುದಾದರೂ ವಿಷಯದ ಮೇಲೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡುವುದನ್ನು ಮಾಡಬಹುದು.
@ಉತ್ತಮ ಮಾನಸಿಕ ಆರೋಗ್ಯಕ್ಕೆ ನಿದ್ದೆ ಅವಶ್ಯಕ. ಬೇಗ ಮಲಗಿ , ಬೇಗ ಏಳುವ ಅಭ್ಯಾಸ ಆದರೆ ಒಳ್ಳೆಯದು.
ಮೇಲಿನ ಕೆಲವು ಸಲಹೆಗಳು ನನಗೆ ಹೊಳೆದವುಗಳು. ಮನೆಯಲ್ಲಿರುವುದು ಬಂಧನವಾಗದೆ ಆನಂದ ಉಂಟುಮಾಡುವಂತಾದರೆ ನಮ್ಮ ಮಾನಸಿಕ ಆರೋಗ್ಯವೂ , ಆತ್ಮ ವಿಶ್ವಾಸ, ಧೈರ್ಯವೂ ಕೋವಿಡ್ ವೈರಸ್ ನ್ನು ಯಶಸ್ವಿಯಾಗಿ ಎದುರಿಸಲು ಸಹಕಾರಿ. ಮನೆ ಮನೆ ಸ್ವಚ್ಛತೆಯ ತಾಣವಾದರೆ, ಆನಂದದ ಮೂಲವಾದರೆ, ಮನ ಮನವೂ ಪ್ರಶಾಂತತೆಯ ನೆಲೆಯಾದರೆ ಪ್ರಪಂಚವೇ ಒಟ್ಟಾಗಿ ಕೋವಿಡ್ ವೈರಸ್ ನ್ನು ತಡೆಗಟ್ಟುಬಹುದು.
ಮೇಲಿನ ಸಲಹೆಗಳನ್ನು ಅನೇಕರು ತಮ್ಮ ಮನೆಗಳಲ್ಲಿ ಪಾಲಿಸುತ್ತಿರಬಹುದು, ಇದಕ್ಕಿಂತ ಉತ್ತಮವಾಗಿಯೂ, ವಿಭಿನ್ನವಾಗಿಯೂ ಮಾಡುತ್ತಿರಬಹುದು. ಅಂತಹ ಸಲಹೆಗಳನ್ನು ಕಾಮೆಂಟ್ ನಲ್ಲಿ ಹಂಚಿಕೊಂಡರೆ ಮತ್ತಷ್ಟು ಅನುಕೂಲವಾಗಬಹುದು.
#ನಿರ್ಭೀತರಾಗಿರೋಣ, #ಜಾಗೃತರಾಗಿರೋಣ, #ಮನೆಮನೆಯ_ಆನಂದ #ಪ್ರಪಂಚದ_ಆನಂದ

ಕಾಮೆಂಟ್‌ಗಳಿಲ್ಲ :
ಕಾಮೆಂಟ್ ಪೋಸ್ಟ್ ಮಾಡಿ